"ಪ್ರತಿಭಟನೆ, ಬಂದ್‌ನ ಆಚೆಗೂ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ"


ಅಕ್ಟೋಬರ್ ೯ ರಿಂದ ೧೧ರವರೆಗೆ ಬಳ್ಳಾರಿಯ ರಾಘವ ಕಲಾಮಂದಿರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ’ರಂಗತೋರಣ’ ವಿದ್ಯಾರ್ಥಿ ನಾಟಕೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ನಾಟಕೋತ್ಸವದಲ್ಲಿ ಸ್ಪರ್ಧಿಸಿದ್ದ ಸುಮಾರು ೨೭ ನಾಟಕಗಳ ಪೈಕಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಮ್‌ಬಿಅ ಕಾಲೇಜಿನ ವಿದ್ಯಾರ್ಥಿಗಳು ಆಡಿದ ’ನಾನು ಮತ್ತು ನಾಳೆ’ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿತು.

೨೦೦೩ನೆಯ ಇಸವಿಯಲ್ಲಿ ಪ್ರಾರಂಭಗೊಂಡ ಈ ನಾಟಕೋತ್ಸವಕ್ಕೆ ಈ ಬಾರಿ ಐದರ ಹರೆಯ. ಇಡೀ ನಾಟಕೋತ್ಸವದ ರೂವಾರಿ, ನಾಟಕೋತ್ಸವದುದ್ದಕ್ಕೂ ಪಾದರಸದಂತೆ ಓಡಾಡುತ್ತಾ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಪ್ರತಿ ನಿಮಿಷವೂ ಹುರಿದುಂಬಿಸುತ್ತಿದ್ದ ಪ್ರೊ. ಭೀಮಸೇನ್ ಅವರ ಜೊತೆ ಆಡಿದ ಎರಡು ಮಾತುಗಳು ಇಲ್ಲಿವೆ.

*****

ಎಬಿವಿಪಿಯವರು ಎಂದರೆ ಕೇವಲ ಬಂದ್ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ನಕಾರಾತ್ಮಕ ಹಣೆಪಟ್ಟಿಗಳಿದ್ದರೂ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ಮಾಡುತ್ತಿರುವ ಕೆಲಸದ ಕೆಲವು ಝಲಕ್ ಕೂಡ ಇಲ್ಲಿದೆ.

*****

"ಇದು ನಮ್ಮ ಐದನೆಯ ವರ್ಷದ ರಂಗತೋರಣ. ಈ ನಾಟಕೋತ್ಸವವನ್ನು ಆರಂಭಸಲು ಸಾಕಷ್ಟು ಕಾರಣಗಳಿವೆ. ಸಾಮಾನ್ಯವಾಗಿ ಎಬಿವಿಪಿಯ ಹುಡುಗರು ಎಂದರೆ ಬಂದ್ ಮಾಡುವವರು, ಗಲಾಟೆ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ಹಣೆಪಟ್ಟಿಗಳಿವೆ. ಆದರೆ ಬಂದ್, ಪ್ರತಿಭಟನೆ ಮತ್ತು ಗಲಾಟೆಯ ಆಚೆಗೂ ಎಬಿವಿಪಿಯ ಹುಡುಗರು ಕೆಲಸ ಮಾಡುತ್ತಾರೆ. ಅವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ."

"ರಜಾ ದಿನಗಳಲ್ಲಿ ಎಬಿವಿಪಿಯ ಹುಡುಗರಿಗೆ ಸಮಯ ನಿರ್ವಹಣೆ, ನಾಯಕತ್ವದ ಕೌಶಗಳು, ಪರಿಣಾಮಕಾರಿ ಸಂವಹನ ಕಲೆ, ವಿಜ್ಞಾನ ಹೀಗೆ ಅನೇಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮಗೆ ಇಂಥ ಎಲ್ಲ ಕಲೆ-ಕೌಶಲಗಳನ್ನು ಒಂದೇ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕಲಿಸುವ ಆಸೆಯಿತ್ತು."

"ಇಂಥ ಸಂದರ್ಭದಲ್ಲಿಯೇ ಕನ್ನಡ ಹಿರಿಯ ನಾಟಕಕಾರ ಡಾ| ಚಂದ್ರಶೇಖರ ಕಂಬಾರರಿಗೆ ನಾಡೋಜ ಪ್ರಶಸ್ತಿ ಬಂತು. ಆಗ ನಾವೂ ನಾಟಕಗಳ ಬಗ್ಗೆ ಏನಾದರೂ ಮಾಡಬೇಕು. ನಾಟಕಕ್ಕಾಗಿ ಕೆಲಸ ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು."

"ನಾಯಕತ್ವದ ಕಲೆ, ಪರಿಣಾಮಕಾರಿ ಸಂವಹನ, ಸಮಯ ನಿರ್ವಹಣೆ ಇಂಥಹ ಅನೇಕ ಕೌಶಲಗಳನ್ನು ವ್ಯವಸ್ಥಿತವಾಗಿ ಮೈಗೂಡಿಸಿಕೊಳ್ಳಬೇಕಾದದ್ದು ಒಬ್ಬ ನಾಟಕಕಾರನ ಮತ್ತು ನಟನ ಅಗತ್ಯ ಗುಣ. ಎಬಿವಿಪಿಯವರು ಹೇಗಿದ್ದರೂ ಇಂಥ ಕೌಶಲಗಳನ್ನು ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಹುಡುಗರಿಗೆ ಕಲಿಸುತ್ತಾರೆ. ಹಾಗೆ ಕಲಿತ ವಿಚಾರಗಳ ಅಭಿವ್ಯಕ್ತಿ ಹೇಗಾಗುತ್ತದೆ ಎಂದು ನೋಡಬೇಕು. ಅದಕ್ಕೆ ನಾಟಕಕ್ಕಿಂತ ಪರಿಣಾಮಕಾರಿ ಮಾಧ್ಯಮ ಯಾವುದಿದೆ?"

"ಈ ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ೨೦೦೩ ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ’ರಂಗತೋರಣ’ ಎಂಬ ಹೆಸರಿನಲ್ಲಿ ಆರಂಭಿಸಿದೆವು. ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ನಾಟಕೋತ್ಸವದಲ್ಲಿ ಏಳು ತಂಡಗಳು ಭಾಗವಹಿಸಿದ್ದವು."

"ನಂತರ ೨೦೦೪ರಲ್ಲಿ ಎರಡನೆಯ ರಂಗತೋರಣ ವಿಭಾಗ ಮಟ್ಟದಲ್ಲಿ ನಡೆಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿ ನಾಟಕ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ೨೦೦೭ನೆಯ ಇಸವಿಯಿಂದ ಈ ಉತ್ಸವ ರಾಜ್ಯಮಟ್ಟದ್ದಾಯಿತು."

"ಪಿಯುಸಿಯಿಂದ ಹಿಡಿದು ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗೆ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಸಿದ್ಧಾಂತ ಬೇಧಗಳನ್ನು ಮರೆತು ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ."

"ಈ ನಾಟಕೋತ್ಸವವನ್ನು ಪ್ರತಿ ವರ್ಷವೂ ಬಳ್ಳಾರಿಯಲ್ಲೇ ನಡೆಸುವುದಕ್ಕೆ ಕಾರಣವಿದೆ. ಬಳ್ಳಾರಿಯ ರಾಘವ ಅವರು ಮತ್ತು ಬೀಚಿಯವರು ನಾಟಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದವರು. ಅದು ನಿಮಗೂ ಗೊತ್ತು. ಬಳ್ಳಾರಿಯ ರಾಘವರಂತೂ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಜಾರ್ಜ್ ಬರ್ನಾರ್ಡ್ ಷಾ ಎದುರಿಗೆ ಆಡಿತೋರಿಸಿದ್ದರಂತೆ. ಷೇಕ್ಸ್‌ಪಿಯರ್‌ಗೂ ಬರ್ನಾರ್ಡ್ ಷಾಗೂ ಆಗಿಬರುತ್ತಿರಲಿಲ್ಲ. ಆದರೂ ಬರ್ನಾರ್ಡ್ ಷಾ ರಾಘವರು ಆ ನಾಟಕಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅದನ್ನು ನೋಡುತ್ತಿದ್ದರಂತೆ."

"ಒಮ್ಮೆ ಗಾಂಧೀಜಿಯವರು ಇಲ್ಲಿಗೆ ಬಂದಿದ್ದಾಗ ಅವರೆದುರಿಗೆ ಒಂದು ನಾಟಕ ತೋರಿಸುವ ಆಸೆಯಾಯಿತಂತೆ. ಗಾಂಧೀಜಿಯವರಿಗೆ ಬಹಳ ಕೆಲಸವಿತ್ತು. ಆದರೂ ಇಪ್ಪತ್ತು ನಿಮಿಷಗಳ ಮಟ್ಟಿಗೆ ನಾಟಕ ನೋಡಲು ಕುಳಿತರು. ನಾಟಕ ನೋಡುವುದರಲ್ಲಿ ತಲ್ಲೀನರಾಗಿಬಿಟ್ಟ ಗಾಂಧೀಜಿ ತಮ್ಮ ಪ್ರಾರ್ಥನೆಯ ಸಮಯವನ್ನೂ ಮರೆತು ನಾಟಕ ನೋಡಿದರಂತೆ. ನಂತರ ರಾಘವರ ಬೆನ್ನು ತಟ್ಟಿ ಹೋದರಂತೆ. ಅಷ್ಟೇ ಅಲ್ಲದೆ, ತಿಲಕರೆದುರು ಮಹಾತ್ಮಾ ಕಬೀರ್ ನಾಟಕವನ್ನು ಆಡಿ ತೋರಿಸಿದ್ದರಂತೆ ನಮ್ಮ ರಾಘವರು."

"ಅಂಥ ನಾಟಕಕಾರರು ಮತ್ತು ಸಾಹಿತಿಗಳು ಜನಿಸಿದ ಈ ನಾಡಿನಲ್ಲಿ ನಾಟಕ ಕಾರ್ಯಕ್ರಮಗಳಿಗೆ ಬಹುವಾದ ಬೆಂಬಲವಿದೆ. ಇಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಹುದೊಡ್ಡ ದಂಡೇ ಇದೆ. ಇದು ಒಂದರ್ಥದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ತವರೂರು."

"ಹಾಗಾಗಿ ಬಳ್ಳಾರಿಯ ಸಾಂಸ್ಕೃತಿಕ ಮುಖವನ್ನು ಜನರಿಗೆ ತೋರಿಸುವುದಕ್ಕೋಸ್ಕರ ಮತ್ತು ರಾಜಕೀಯದಾಚೆಗೂ ಬಳ್ಳಾರಿಗೆ ಒಂದು ಒಳ್ಳೆಯ ಹೆಸರಿದೆ ಎಂಬುದನ್ನು ಜನರಿಗೆ ತೋರಿಸಲು ಈ ಉತ್ಸವವನ್ನು ಬಳ್ಳಾರಿಯಲ್ಲೇ ನಡೆಸುತ್ತೇವೆ."
Read More

ಸಹಿಷ್ಣುತೆಯ ಪಾಠ; ಪ್ರತ್ಯೇಕತೆಯ ಆಟ

ಭಾರತದಲ್ಲಿ ಕೋಮುಗಲಭೆಗಳು ಸಂಭವಿಸುವುದು, ಕೋಮುಗಲಭೆಗಳು ಅತಿರೇಕದ ಹಂತ ಮುಟ್ಟಿ, ಗಲಭೆ ನಡೆಸಿದವರಿಗೇ ಸುಸ್ತಾಗಿ ನಂತರ ತಣ್ಣಗಾಗುವುದು ನಮ್ಮಲ್ಲಿ ಯಾರಿಗೂ ಹೊಸ ವಿಚಾರವಲ್ಲ. ಹಾಗೆ ಗಲಭೆಗಳು ಸಂಭವಿಸಿ ತಣ್ಣಗಾದ ನಂತರ ಒಂದಿಷ್ಟು ಮಂದಿ ಸೇರಿ ಶಾಂತಿ ಸಭೆ ನಡೆಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುವುದು, ಇನ್ನೊಂದಿಷ್ಟು ಮಂದಿ (ಅತಿ)ಬುದ್ಧಿಜೀವಿಗಳು ’ಸತ್ಯಶೋಧನಾ ಸಮಿತಿ’ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡು ಗಲಭೆ ನಡೆದ ಸ್ಥಳಕ್ಕೆ ಸ್ವಯಂಪ್ರೇರಣೆಯಿಂದ ತೆರಳಿ ’ಸತ್ಯಶೋಧನೆ’ ನಡೆಸುವುದು ಕೂಡ ನಮ್ಮ ಪಾಲಿಗೆ ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಹೆಚ್ಚಿನ ಸತ್ಯಶೋಧನಾ ಸಮಿತಿಗಳ ವರದಿಗಳು ಸಾಮಾನ್ಯವಾಗಿ ಒಂದೇ ರೀತಿ ರೀತಿಯಲ್ಲಿ ಇರುತ್ತವೆ ಎಂಬುದೂ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.

ಕೋಮುಗಲಭೆಗಳಿಗೆಲ್ಲ ಭಾರತದ ಬಹುಸಂಖ್ಯಾತರೇ ಕಾರಣರು. ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೆಲ್ಲಾ ಕೋಮುವಾದವನ್ನೇ ಪ್ರತಿಪಾದಿಸುತ್ತವೆ ಮತ್ತು ಈ ದೇಶದಲ್ಲಿ ನಡೆಯುವ ಎಲ್ಲ ಕೋಮುಗಲಭೆಗಳಿಗೂ ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೇ ಕಾರಣ ಎಂದು ಷರಾ ಬರೆಯುವುದು ನಮ್ಮಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಯೇ ಆಗಿದೆ. ದೇಶದ ಬಹುಸಂಖ್ಯಾತರ ಸಂಘಟನೆಗಳೇ ಕೋಮುಗಲಭೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ಬಹುಷಃ ಈ ಸತ್ಯಶೋಧನಾ ಸಮಿತಿಗಳು ಘಟನಾಸ್ಥಳಕ್ಕೆ ಆಗಮಿಸುವ ಮೊದಲೇ ನಿರ್ಧರಿಸಿಕೊಂಡು ಬಂದಿರುತ್ತವೆಯೇನೋ?!

ಅದಿರಲಿ. ಗಲಭೆಗಳು ನಡೆದ ಅನಂತರದಲ್ಲಿ ಬಹುಸಂಖ್ಯಾತ ಸಮುದಾಯದವರಿಗೆ ನೀವು ಸಹಿಷ್ಣುಗಳಾಗಿರಿ ಎಂದು ಹೇಳುವುದು ನಮ್ಮ ನಾಡಿನ ಬುದ್ಧಿಜೀವಿಗಳಿಗೆ, ವಿಚಾರವಾದಿಗಳಿಗೆ ಹುಟ್ಟುತ್ತಲೇ ಸಿದ್ಧಿಸಿರುವ ಕಲೆ.

ಸಹಿಷ್ಣು ಎಂಬ ಪದದ ವಾಚ್ಯಾರ್ಥ ಮತ್ತು ಭಾವಾರ್ಥ ಕಷ್ಟವನ್ನು ಸಹಿಸಿಕೊ ಎಂದಾಗುತ್ತದೆ. (ಸಹಿಷ್ಣು ಎಂಬ ಪದದ ಅರ್ಥ ಇದಲ್ಲ ಎಂದಾದರೆ ನಿಜಾರ್ಥ ಯಾವುದು ಎಂಬುದನ್ನು ಅಲ್ಲಗಳೆಯುವವರೇ ತಿಳಿಸಿಕೊಡಬೇಕು.)

ಮನುಷ್ಯನಾದವನು ಕಟುಕನನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅನ್ಯಾಯಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹಾಗೂ ಇನ್ನೂ ಅನೇಕ ಅಸಹಜ ಸಂಗತಿಗಳನ್ನು, ತಮ್ಮ ನಿರೀಕ್ಷೆಗೆ ವಿರುದ್ಧವಾಗಿ ಸಾಗುವ ಸಂಗತಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಯಾರಿಗೂ ಕೂಡ ಸಹಜತೆಯನ್ನು ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ.

ಮಲೆನಾಡಿನಲ್ಲಿ ಹುಟ್ಟಿದವನಿಗೆ ಜಡಿಮಳೆಯನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ; ಅವನಿಗೆ ಆ ಮಳೆಯನ್ನು ಒಫ್ಫಿಕೊಳ್ಳುವ ಅಗತ್ಯವಿರುತ್ತದೆ. ಏಕೆಂದರೆ ಮಲೆನಾಡಿನ ಪ್ರಕೃತಿಯೇ ಜಡಿಮಳೆಯನ್ನು ಪೋಷಿಸುತ್ತಿರುತ್ತದೆ. ಆದರೆ ಅದೇ ಮಲಿನಾಡಿನವನಿಗೆ ಬಯಲುಸೀಮೆಯ ಬಿರುಸೆಖೆ ಅಸಹನೀಯವೆನಿಸುತ್ತದೆ. ಅವನು ಕೆಲವು ಸಂದರ್ಭಗಳಲ್ಲಿ ಆ ಸೆಖೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಯಾವುದು ಅವನ ಪ್ರಕೃತಿಗೆ ವಿರುದ್ಧವೋ ಅದನ್ನು ಅವನು ಸಹಿಸಿಕೊಳ್ಳಬೇಕು. ಯಾವುದು ಅವನ ಪ್ರಕೃತಿಗೆ ಪೂರಕವೋ ಅದನ್ನು ಆತ ಖುಷಿಯಿಂದ ಅನುಭವಿಸಬೇಕು ಮತ್ತು ಅನುಭವಿಸುತ್ತಾನೆ.

ಅಂದರೆ ಸಹಿಷ್ಣುಗಳಾಗಿರುವುದು ಅಂದರೆ ನಮಗೆ ಅಸಹನೀಯವೆನಿಸುವುದನ್ನೂ ಸಹಿಸಿಕೊಳ್ಳುವುದು. ಅಥವಾ ನಮಗೆ ಒಗ್ಗಿಬರದ್ದನ್ನು ಸಹಿಸಿಕೊಳ್ಳುವುದು. ಅದರ ಜೊತೆಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಬದುಕುವುದು ಎಂದರ್ಥ.

ಈ ದೇಶದ ಬಹುಸಂಖ್ಯಾತ ಸಮುದಾಯದವರ ಬಳಿ ನೀವು ಸಹಿಷ್ಣುಗಳಾಗಿರಬೇಕು ಎಂದು ಬುದ್ಧಿಜೀವಿಗಳು ಉಪದೇಶಿಸುವುದೂ ಇದೇ ಅರ್ಥದಲ್ಲಿಯೇ.

ಸರಿ, ಈ ರೀತಿಯ ಸಹಿಷ್ಣುತೆ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಒಂದು ಹಂತದವರೆಗೆ ಅನಿವಾರ್ಯ. ಯಾರೂ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದಲ್ಲದೆ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವಾಗ, ವಿವಿಧ ಮತ-ಧರ್ಮಗಳ ನಡುವೆ ಸಾಮರಸ್ಯವಿರಲು ಸಹಿಷ್ಣುತೆ ಅತ್ಯಗತ್ಯ. ಆದರೆ ಇವತ್ತು ಬಹುಸಂಖ್ಯಾತ ಸಮುದಾಯದವರನ್ನು ಸಹಿಷ್ಣುಗಳಾಗಿರಿ ಎಂದು ಹೇಳುವುದು ಮತ್ತು ಅಲ್ಪಸಂಖ್ಯಾತ ಸಮುದಾಯದ ಅಸಹಿಷ್ಣುತೆಯ ಬಗ್ಗೆ ಜಾಣ ಮೌನ ತೋರಿಸುವುದು ಬುದ್ಧಿಜೀವಿ ವರ್ಗ ಯಾವತ್ತಿಂದಲೂ ಬೆಳೆಸಿಕೊಂಡು ಬಂದಿರುವ ವೈಚಾರಿಕ ಇಬ್ಬಂದಿತನದ ಮುಂದುವರೆದ ಭಾಗವೇ ಅಗುತ್ತದೆ.

ನಮ್ಮ ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ತಮ್ಮನ್ನಾಳುವ ಪ್ರಭುತ್ವವು ತಮ್ಮ ಜೀವರಕ್ಷಣೆಯ ಖಾತ್ರಿ ನೀಡಲಿ ಎಂದು ನಿರೀಕ್ಷಿಸುವುದು ಪ್ರತಿ ವ್ಯಕ್ತಿಯ ಮೂಲಭೂತ ಹಕ್ಕೂ ಹೌದು. ಇದೇ ಹಕ್ಕಿನಲ್ಲಿ ಬೇರೆಯವರಿಂದ ವಿನಾಕಾರಣ ಉಪಟಳಕ್ಕೆ ಈಡಾಗದೆ ಇರುವ ಹಕ್ಕೂ ಸೇರಿಕೊಳ್ಳುತ್ತದೆ. ಆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತ ಸಮುದಾಯದವರಿಂದ ತೊಂದರೆಗೊಳಗಾದಾಗಲೆಲ್ಲ ನಮ್ಮ ಬುದ್ಧಿಜೀವಿ ವರ್ಗ ನೀವು ಸಹಿಷ್ಣುಗಳಾಗಿರಿ ಎಂದು ನೀತಿ ಬೋಧೆ ಮಾಡುತ್ತದೆ. ಹಾಗಂತ ಅನ್ಯರಿಗೆ ತೊಂದರೆ ಕೊಡಬೇಡಿ ಅಂತ ತೊಂದರೆ ಕೊಡುವವರಿಗೆ ಸೂಚಿಸುವುದಿಲ್ಲ.

ಇದು ಸಹಿಷ್ಣುತೆ ಎಂಬ ಪದವನ್ನುಪಯೋಗಿಸಿಕೊಂಡು ಮಾಡುವ ಠಕ್ಕ ಕೆಲಸವೇ ಅಲ್ಲವೇ? ತೊಂದರೆಗೊಳಗಾದವರು ಸಹಿಷ್ಣುಗಳಾಗಿರಲಿ ಎಂದರೆ ಏನರ್ಥ? ತೊಂದರೆ ಕೊಡುವವರು ಸುಖವಾಗಿರಲಿ, ಅವರಿಗೆ ಏನೂ ಅಪಾಯವಾಗದಿರಲಿ ಎಂದರ್ಥವೇ? ಸಹಿಷ್ಣುತೆಯ ಪಾಠ ಹೇಳಿಕೊಡುವವರು ಉತ್ತರಿಸಬೇಕು.

ಅವರು ಅಲ್ಪಸಂಖ್ಯಾತರಿರಲಿ ಅಥವಾ ಬಹುಸಂಖ್ಯಾತರಿರಲಿ ಇನ್ನೊಬ್ಬರಿಗೆ ತೊಂದರೆ ಕೊಟ್ಟಾಗ ತೊಂದರೆಗೊಳಗಾದವನಿಗೆ ಸಹಿಷ್ಣುತೆಯ ಪಾಠ ಹೇಳಿಕೊಡುವುದಕ್ಕಿಂತ ತೊಂದರೆ ನೀಡಿದವನಿಗೆ ಕಿವಿಹಿಂಡಿ ಬುದ್ಧಿ ಹೇಳಬೇಕಾಗುತ್ತದೆ. ಅದಲ್ಲದೇ ಸಂವಿಧಾನದಲ್ಲಿಯೇ ಘನತೆಯಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಿರುವುದರಿಂದ ಅವನು ತೊಂದರೆಗೆ ಒಳಗಾದಾಗ ಸಹಿಷ್ಣುವಾಗಿರುವ ಅವಶ್ಯಕತೆಗಿಂತ ಹೆಚ್ಚಾಗಿ ತೊಂದರೆ ನೀಡಿದವನಿಗೆ ಶಿಕ್ಷೆ ನೀಡಬೇಕಾದ ಅಗತ್ಯತೆ ಹೆಚ್ಚಿರುತ್ತದೆ.

ಮೊನ್ನೆ ಬಂಟ್ವಾಳದ ಕಾಲೇಜೊಂದರಲ್ಲಿ ಸಮವಸ್ತ್ರದ ವಿಚಾರವಾಗಿ ನಡೆದ ವಿವಾದದ ಸಮಯದಲ್ಲೂ ಬಹುಸಂಖ್ಯಾತರಿಗೆ ಸಹಿಷ್ಣುಗಳಾಗಿರಲು ಸೂಚಿಸಲಾಯಿತು. ಅಲ್ಪಸಂಖ್ಯಾತರಿಗೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಸಂವಿಧಾನದತ್ತವಾಗಿಯೇ ಇದೆ ಹಾಗಾಗಿ ಅವರು ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವೇ ಇಲ್ಲ ಎಂದೂ ವಾದಿಸಲಾಯಿತು. ಅಲ್ಪಸಂಖ್ಯಾತ ಸಮುದಾಯದವರೊಬ್ಬರು ತಮ್ಮ ಧರ್ಮವನ್ನು ಮುಂದಿಟ್ಟುಕೊಂಡು ಕಾಲೇಜಿನ ನಿಯಮವನ್ನು ಅನುಸರಿಸುವುದಿಲ್ಲ ಎಂದರೆ ಕಾಲೇಜಿನಲ್ಲಿ ನಿಯಮಗಳನ್ನು ತರುವುದಾದರೂ ಏತಕ್ಕೆ? ಇದೇ ರೀತಿ ಅಲ್ಪಸಂಖ್ಯಾತ ಸಮುದಾಯದವರು ಕರ್ನಾಟದಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮಣನೊಬ್ಬ ಕಚ್ಚೆ-ಪಂಜೆಯನ್ನುಟ್ಟುಕೊಂಡು ಬರುತ್ತೇನೆ ಅಂದರೆ ಅದನ್ನು ನಮ್ಮ ಬುದ್ಧಿಜೀವಿಗಳು ಒಪ್ಪುತ್ತಾರೆಯೇ? ಆಗ ನಮ್ಮ ಪ್ರಗತಿಪರರು ಅಲ್ಪಸಂಖ್ಯಾತರಿಗೆ ಸಹಿಷ್ಣುತೆಯ ಪಾಠ ಮಾಡಬಲ್ಲರೇ? ನಮ್ಮ ವಿಚಾರವಾದಿಗಳ, ಪ್ರಗತಿಪರರ ಇಂಥ ಇಬ್ಬಂದಿತನವೇ ಇಂದು ಅಲ್ಪಸಂಖ್ಯಾತರನ್ನು ದೇಶದ ಮುಖ್ಯವಾಹಿನಿಯಿಂದ ದೂರ ಸರಿಸುತ್ತಿದೆ.

ಹಾಗಂತ ಯಾವ ಅಲ್ಪಸಂಖ್ಯಾತರೂ ಈ ದೇಶಕ್ಕೆ ಎಂದಿಗೂ ಹೊರೆಯಲ್ಲ. ಅವರೆಲ್ಲರೂ ಈ ದೇಶದ ಮಕ್ಕಳೇ ಆಗಿರುತ್ತಾರೆ. ಜೈನ, ಬೌದ್ಧ, ಪಾರ್ಸಿ, ಶಕ, ಹೂಣರಂಥ ಅನೇಕ ಅಲ್ಪಸಂಖ್ಯಾತ ಸಮುದಾಯವನ್ನು ತನ್ನವರನ್ನಾಗಿಸಿಕೊಂದಿರುವ ಭಾರತೀಯ ಸಮಾಜಕ್ಕೆ ಮುಸ್ಲಿಂ, ಕ್ರಿಶ್ಚಿಯನ್ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ. ಆದರೆ ಆ ಸಮುದಾಯ ಕೂಡ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯತೆಯಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಕೂಡ ಈ ಹೊಂದಾಣಿಕೆಯ ಪ್ರಕ್ರಿಯೆಯ ಒಂದು ಭಾಗವೇ ಆಗಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳದೇ ಇರುವುದು ಮತ್ತು ಎಲ್ಲರೂ ಪಾಲಿಸುವ ವಸ್ತ್ರಸಂಹಿತೆಯನ್ನು ಪಾಲಿಸಲು ಒಪ್ಪದೇ ಇರುವುದೂ ಕೆಲ ಮಂದಿ ಅಲ್ಪಸಂಖ್ಯಾತರ ಅಸಹಿಷ್ಣುತೆಯ ರೂಪವಾಗುತ್ತದೆ. ಸಮಾಜದೊಂದಿಗೆ ಬೆರೆಯದೆ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವ ಮನಸ್ಥಿತಿಯ ಪ್ರತೀಕವಾಗುತ್ತದೆ.

ಇವತ್ತು ಸಹಿಷ್ಣುತೆಗಿಂತ ಹೆಚ್ಚು ಬೇಕಾಗಿರುವುದು ಸಮರಸತೆ. ಸಮರಸತೆಯಲ್ಲಿ ಯಾರೂ ಯಾರನ್ನೂ ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಿಗೆ ಅಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲು ಕಾರಣಗಳಿರುತ್ತವೆ. ನಿನಗೆ ನೋವಾಗುವಂಥ ಕೆಲಸವನ್ನು ನಾನು ಮಾಡಲಾರೆ; ನನಗೆ ನೋವಾಗುವಂಥದ್ದನ್ನು ನೀನೂ ಮಾಡಬೇಡ ಎಂಬ ಹೊಂದಾಣಿಕೆ, ಪರಸ್ಪರರ ಸಂವೇದನೆಗಳನ್ನು ಅರಿತುಕೊಳ್ಳುವ ಮನೋಭಾವ ಇಂದಿನ ಅಗತ್ಯ. ಅದಕ್ಕೆ ತೆರೆದ ಮನಸ್ಸು ಮತ್ತು ಬದಲಾವಣೆಗೆ ಒಪ್ಪಿಕೊಳ್ಳುವ ನಾಯಕತ್ವ ಬೇಕು. ಎಲ್ಲ ಮತ-ಧರ್ಮಗಳಲ್ಲಿಯೂ ಇರುವ ಹುಳುಕಗಳನ್ನು ಮತ್ತು ಜಾಡ್ಯಗಳನ್ನು ತೊಲಗಿಸುವ ಎದೆಗಾರಿಕೆ ಬೇಕು. ರಾಜಕೀಯ ಮತ್ತು ಧಾರ್ಮಿಕ ಆಯಾಮವನ್ನು ಮೀರಿದ ಸಮಾಜಮುಖಿ ಚಿಂತನೆಯುಳ್ಳ ಯುವಕರು ಬೇಕು. ಅಲ್ಲದೆ ನಮ್ಮ ಬುದ್ಧಿಜೀವಿ, ವಿಚಾರವಾದಿ ವರ್ಗದ ಬೆಂಬಲವೂ ಬೇಕಾಗುತ್ತದೆ.

ಆ ಒಂದು ನವ ದಿಗಂತದೆಡೆಗೆ ಮನಸ್ಸನ್ನು ತಿರುಗಿಸೋಣ. ಬದಲಿಗೆ ಸಹಿಷ್ಣುತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರಲ್ಲಿ ಪ್ರತ್ಯೇಕತೆಯ ಮನೋಭಾವವನ್ನು ಬಿತ್ತುವುದು ಬೇಡ.

Read More

ಕುಪ್ಪಳಿಯ ಸಾಂಗತ್ಯ

ಕುಪ್ಪಳಿಯಲ್ಲಿ ಮೊನ್ನೆ ತಾನೆ ಮುಕ್ತಾಯವಾದ ಎರಡು ದಿನಗಳ ಚಿತ್ರೋತ್ಸವದ ಬಗ್ಗೆ ನನ್ನ ನಾಲ್ಕು ಮಾತು ಬರೆಯೋಣ ಎಂದು ಕುಳಿತರೆ ಏನು ಬರೆಯುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಕಾರಣ; ಸಾಂಗತ್ಯ ತಂಡದವರು ಆಯೋಜಿಸಿದ ಚಿತ್ರೋತ್ಸವದ ಕೊನೆಯಲ್ಲಿ ಪ್ರದರ್ಶಿಸಿದ ಬಾಯ್ ಇನ್ ದಿ ಸ್ಟ್ರೈಪ್ಡ್ ಪಾಯ್ಜಾಮಾ ಚಿತ್ರದ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ಅಷ್ಟೊಂದು ಮನಮುಟ್ಟುವ ಚಿತ್ರ ಅದು.

ಜೂನ್ ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಸಿಬಂತಿ ಪದ್ಮನಾಭ ಅವರು ಕುಪ್ಪಳಿಯಲ್ಲಿ ಸಾಂಗತ್ಯ ಬಳಗದವರು ನಡೆಸುವ ಚಿತ್ರೋತ್ಸವದ ಬಗ್ಗೆ ಹೇಳಿದ್ದರು. ಚಿತ್ರೋತ್ಸವಕ್ಕೆ ಬರಲು ಆಪ್ತ ಆಮಂತ್ರಣವನ್ನೂ ನೀಡಿದ್ದರು. ಆದರೂ ಮನಸ್ಸು ಮಾತ್ರ ಹೋಗಲೋ ಬೇಡವೋ ಎಂದು ಕಾಲಹರಣ ಮಾಡುತ್ತಿತ್ತು.

ನೀನು ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, ತೃತೀಯ ಸೆಮಿಸ್ಟರ್ ಓದುತ್ತಿರುವವನಾಗಿದ್ದರೆ ಈ ಕಾರ್ಯಕ್ರಮಕ್ಕೆ ನೀನು ಕಡ್ಡಾಯವಾಗಿ ಬರಲೇಬೇಕು ಎಂದ ಸಿಬಂತಿ ಪದ್ಮನಾಭರ ಮಾತು ಮತ್ತು ಸಲಹೆ-ಚಿತ್ರೋತ್ಸವದಲ್ಲಿ ಬರುವಂತೆ ಮಾಡಿತು. ಆದರೂ ಚಿತ್ರೋತ್ಸವ ಹೇಗಾಗುತ್ತದೆಯೋ ಏನೋ, ಅಲ್ಲಿಗೆ ಯಾರ್ಯಾರು ಬರುತ್ತಾರೋ ಎಂಬ ಪ್ರಶ್ನೆಗಳೊಂದಿಗೆ ಕುಪ್ಪಳಿ ತಲುಪಿದ್ದೆ.

ಆದರೆ ಈಗ ಯಾವ ಪ್ರಶ್ನೆಗಳು, ಯಾವ ಅನುಮಾನಗಳೂ ಉಳಿದಿಲ್ಲ. ಅಲ್ಲಿನ ವಾತಾವರಣ, ಬಳಗದವರ ಆತ್ಮೀಯತೆ, ಪ್ರದರ್ಶಿಸಿದ ಚಿತ್ರಗಳು, ಮತ್ತೊಮ್ಮೆ ಸಿಕ್ಕ ಮತ್ತು ಮತ್ತೆ ಮತ್ತೆ ಸಿಗುವ ಸ್ನೇಹಿತರು ಈ ಕಾರ್ಯಕ್ರಮದ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.

ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಹಲವು ಚಿತ್ರಗಳ ಪೈಕಿ ಮೂರು ಚಿತ್ರಗಳು ನನ್ನನ್ನು ತೀವ್ರವಾಗಿ ಕಾಡಿವೆ. ಅವು ಕಾರಂತಜ್ಜನಿಗೊಂದು ಪತ್ರ, ಗೋಸ್ಟ್ ಆಂಡ್ ದಿ ಡಾರ್ಕ್‌ನೆಸ್ ಮತ್ತು ಮೊದಲೇ ಹೇಳಿದಂತೆ ಬಾಯ್ ಇನ್ ದಿ ಸ್ಟ್ರೈಪ್ಡ್ದಿ ಪಾಯ್ಜಾಮಾ.

ಕಾರಂತಜ್ಜನಿಗೊಂದು ಪತ್ರ ಚಿತ್ರ ಇಷ್ಟವಾಗಲು ನನ್ನೂರಾದ ಕರಾವಳಿಯಲ್ಲಿನ ಕಡಲ್ಕೊರೆತದ ಸಮಸ್ಯೆಯನ್ನು ಚಿತ್ರದ ಕಥೆಯನ್ನಾಗಿಸಿಕೊಂಡದ್ದು ಕಾರಣವಾಗಿರಬಹುದು. ಚಿತ್ರದಲ್ಲಿ ಬರುವ ಶಾನುಭೋಗರ ಮಗ ವಯಸ್ಸಿಗೆ ಅತಿ ಎನ್ನುವಂತಹ ಮಾತುಗಳನ್ನು ಆಡುತ್ತಾನಾದರೂ, ಒಟ್ಟಾರೆ ಆ ಚಿತ್ರ ನಮಗೆ ತಲುಪಿಸುವ ಸಂದೇಶ ನಿಜಕ್ಕೂ ಗಂಭೀರವಾದದ್ದು.

ಬಾಯ್ ಇನ್ ದಿ ಸ್ಟ್ರೈಪ್ಡ್ಸ್ಟ್ರಿಪಾಯ್ಜಾಮಾ ಹಿಟ್ಲರ್ ಕಾಲದ ಯಹೂದಿ ಮತ್ತು ಜರ್ಮನ್ ಮಕ್ಕಳಿಬ್ಬರ ನಡುವಿನ ಸ್ನೇಹವನ್ನು ಕಥೆಯನ್ನಾಗಿಸಿಕೊಂಡಿದೆ. ಅದರಲ್ಲಿ ಬರುವ ಯಹೂದಿ ಹುಡುಗನ ಅಭಿನಯವಂತೂ ಮತ್ತೆ ಮತ್ತೆ ಕಾಡುತ್ತದೆ. ಯಹೂದಿಗಳೆಲ್ಲಾ ಕೆಟ್ಟವರು ಅಂತ ಹಿಟ್ಲರ್ ಕಾಲದ ಜರ್ಮ್ನ್ ಪಠ್ಯಪುಸ್ತಗಳಲ್ಲಿ ಬರೆದಿದ್ದನ್ನು ಓದಿ ತಿಳಿದಿಕೊಂಡಿದ್ದ ಜರ್ಮನ್ ಬಾಲಕ ಯಹೂದಿ ಬಾಲಕನನ್ನು ಭೇಟಿಯಾದಾಗ ನಿನ್ನಪ್ಪ ನಿನ್ನನ್ನು ಪ್ರೀತಿಸುತ್ತಾನಾ? ಎಂದು ಪ್ರಶ್ನಿಸುತ್ತಾನೆ. ಕಾರಣ ಜರ್ಮನ್ ಬಾಲಕನ ಪ್ರಕಾರ ಯಹೂದಿಗಳೆಲ್ಲಾ ಕೆಟ್ಟವರು ಮತ್ತು ಅವರು ಕೆಟ್ಟವರಾಗಿರುವ ಕಾರಣ ಅವರು ಯಾರೂ ತಮ್ಮ ಮಕ್ಕಳನ್ನು ಪ್ರೀತಿಸುವುದಿಲ್ಲ.ನಿನ್ನಪ್ಪ ನಿನ್ನನ್ನು ಪ್ರೀತಿಸುವಷ್ಟೇ ನನ್ನಪ್ಪನೂ ನನ್ನನ್ನೂ ಪ್ರೀತಿಸುತ್ತಾನೆ ಎಂಬ ಯಹೂದಿ ಹುಡುಗನ ಮಾತು ಜರ್ಮನ್ ಬಾಲಕನನ್ನು ಒಂದು ಕ್ಷಣ ಮೂಕನನ್ನಾಗಿಸುತ್ತವೆ. ಪ್ರೇಕ್ಷಕರ ಮನಸ್ಸನ್ನೂ ಆರ್ದ್ರಗೊಳಿಸುತ್ತದೆ.

ಚಿತ್ರ ಪ್ರದರ್ಶನದ ನಂತರದ ಚರ್ಚೆಯ ಬಗ್ಗೆ ವಿಭಿನ್ನ ರೀತಿಯ ಅಭಿಪ್ರಾಯಗಳಿವೆ. ಸಾಂಗತ್ಯದ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನದ ನಂತರ ಒಮ್ಮೆ ಎಲ್ಲರೂ ಒಟ್ಟಾಗಿ ಕುಳಿತು ಆ ಚಿತ್ರದ ಬಗ್ಗೆ ಚರ್ಚಿಸುತ್ತಾರೆ. ಆ ಸಂದರ್ಭದಲ್ಲಿ ಕೆಲವು ಹಿರಿಯರ ಉಪಸ್ಥಿತಿ (ಉದಾ: ಡಾ. ಜಿ ಬಿ ಹರೀಶ್, ಪರಮೇಶ್ ಗುರುಸ್ವಾಮಿ) ವಿಮರ್ಶೆ/ಚರ್ಚೆಗೊಂದು ಘನತೆಯನ್ನು ತಂದುಕೊಟ್ಟಿತ್ತು.

ಆದರೆ ಚಿತ್ರಪ್ರದರ್ಶನದ ಕೂಡಲೇ ಆ ಚಿತ್ರದ ಬಗ್ಗೆ ಚರ್ಚೆ ನಡೆಸುವುದು ಚೆನ್ನಾಗಿರದು. ಹಾಗೆ ಮಾಡುವುದರಿಂದ ಪ್ರೇಕ್ಷಕನಿಗೆ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದು. ಪ್ರೇಕ್ಷಕ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಿ, ಯೋಚಿಸಿ ಅನಂತರ ಮಾತಾಡಬೇಕು ಎಂಬ ವಾದವೂ ಇದೆ. ಈ ಸಾಧ್ಯತೆ ಬಗ್ಗೆಯೂ ಸಾಂಗತ್ಯ ತಂಡ ಯೋಚಿಸಲೆಂಬುದು ನನ್ನ ಮನವಿ.

ಉಳಿದಂತೆ ಎಲ್ಲವೂ ಖುಶ್… ಊಟ, ವಸತಿ, ಆತಿಥ್ಯ…. ಇವ್ಯಾವುದರ ಬಗ್ಗೆಯೂ ಎರಡು ಮಾತನಾಡುವಂತಿಲ್ಲ. ಇದೆಲ್ಲಕ್ಕೂ ಕಳಶಪ್ರಾಯವಾಗಿ ಕುಪ್ಪಳಿಯ ರಮ್ಯ ಪರಿಸರ, ಕವಿಶೈಲದ ಮನಮೋಹಕ, ಎದೆಗೂಡಲ್ಲಿ ಸದಾ ಬೆಚ್ಚಗಾಗಿರುವ ನೆನಪುಗಳು.

ಸಾಂಗತ್ಯ ತಂಡ ಮತ್ತೆ ಮತ್ತೆ ಈ ಚಿತ್ರೋತ್ಸವವನ್ನು ಕುಪ್ಪಳಿಯಲ್ಲೇ ನಡೆಸಲಿ. ನಮ್ಮನ್ನು ಪ್ರತಿ ಬಾರಿಯೂ ಮರೆಯದೇ ಆಹ್ವಾನಿಸಲಿ.

Read More

ಒಂದು ಪುಟಾಣಿ ಕತೆ

ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ರಾಮ, ಭೀಮ ಮತ್ತು ಸೋಮ ಎಂಬ ಮೂವರು ಚಡ್ಡಿ ದೋಸ್ತಿಗಳು ಇದ್ದರು. ಅವರದ್ದು ಎಂದಿಗೂ ಮುರಿಯಲಾರದಂತಹ ಸ್ನೇಹ. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ವಿಷಯದಲ್ಲಿ ಅಸಾಮಾನ್ಯ ಬುದ್ಧಿವಂತರು.

ಹೀಗೆ ಒಂದು ದಿನ ಆ ಮೂವರು ಸ್ನೇಹಿತರು ಒಟ್ಟಿಗೆ ಅದು ಇದು ಅಂತ ಹರಟೆ ಹೊಡೆಯುತ್ತ ಚಹ ಕುಡಿಯುತ್ತ ಕುಳಿತಿದ್ದರು. ಆಗ ಅವರಲ್ಲಿ ಸೋಮನಿಗೆ ಜಗತ್ತಿನಲ್ಲಿ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳಲ್ಲಿ ಸರ್ವಕಾಲಗಳಲ್ಲಿಯೂ ಸತ್ಯವಾಗಿರುವ ಸಿದ್ಧಾಂತ ಯಾವುದು ಎಂಬ ಅನುಮಾನ ಮೂಡಿತು.

ಸರಿ, ತನ್ನ ಅನುಮಾನ ಬಗೆಹರಿಸಿಕೊಳ್ಳಲು ಸೋಮ ತನ್ನ ಮನಸಿನಲ್ಲಿ ಮೂಡಿದ ಪ್ರಶ್ನೆಯನ್ನು ರಾಮ ಮತ್ತು ಭೀಮನ ಮುಂದೆ ಕೇಳುವ ನಿರ್ಧಾರಕ್ಕೆ ಬಂದ.

"ನಿಮ್ಮ ಪ್ರಕಾರ ಜಗತ್ತಿನ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳ ಪೈಕಿ ಸಾರ್ವಕಾಲಿಕ ಸತ್ಯವಾದ ಸಿದ್ಧಾಂತ ಯಾವುದು?" ಅಂತ ಸೋಮ ತನ್ನ ಪ್ರಶ್ನೆಯನ್ನು ಉಳಿದಿಬ್ಬರ ಮುಂದೆ ಇಟ್ಟ.

ರಾಮ ಮತ್ತು ಭೀಮನ ಪೈಕಿ ರಾಮನಿಗೆ ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ ಅನ್ನುವುದು ತಿಳಿಯಲಿಲ್ಲ. ಆದರೆ ಭೀಮ ಒಮ್ಮೆ ನಸುನಕ್ಕ. ಬಳಿಕ ಪ್ರಶ್ನೆ ಕೇಳಿದ ಸೋಮನ ಕಡೆಗೆ ತಿರುಗಿ "ನಿನ್ನ ಊಟ ಆಯಿತಾ?" ಎಂದು ಮರು ಪ್ರಶ್ನಿಸಿದ.

"ಆಯಿತು" ಎಂಬ ಉತ್ತರ ಸೋಮನ ಕಡೆಯಿಂದ ಬಂತು.

"ಹೊಟ್ಟೆ ತುಂಬಾ ಊಟ ಮಾಡಿದೆಯಾ? ಊಟ ತಕ್ಕಮಟ್ಟಿಗೆ ರುಚಿಯಾಗಿತ್ತಾ?" ಎಂದು ಮತ್ತೆ ಭೀಮ ಪ್ರಶ್ನಿಸಿದ.

"ಹೌದು, ರುಚಿಯಾಗಿತ್ತು. ಹೊಟ್ಟೆತುಂಬಾ ಊಟ ಮಾಡಿದೆ." ಎಂದುತ್ತರಿಸಿದ ಸೋಮ.

"ಜಗತ್ತಿನ ಪರಮ ಸತ್ಯ ಯಾವುದು ಮತ್ತು ಸಾರ್ವಕಾಲಿಕೆ ಸಿದ್ಧಾಂತ ಯಾವುದು ಎಂಬ ನಿನ್ನ ಪ್ರಶ್ನೆಗೆ ಇದೇ ನನ್ನ ಉತ್ತರ" ಎಂದ ಭೀಮ ಸೋಮನ ಉತ್ತರಕ್ಕೂ ಕಾಯದೆ ಎತ್ತಲೋ ಹೊರಟುಹೋದ.

***

(ನನ್ನ ಗುರುಗಳೊಬ್ಬರು ಹೇಳಿದ ಕತೆ)

Read More

ದೀನದಯಾಳರ ನಿರಹಂಕಾರ

ಅದು ೧೯೬೦ರ ದಶಕ. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರು ಭಾರತೀಯ ಜನ ಸಂಘದ ಕೆಲವು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದರು. ಹಾಗೆಯೇ ಪಕ್ಷದ ಮತ್ತು ಸಂಘದ ಕೆಲ ಹಿರಿಯರ ಸೂಚನೆಯ ಮೇರೆಗೆ ೧೯೬೦ರಲ್ಲಿ ’ಆರ್ಗನೈಸರ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ ಅದು.
ಆಡ್ವಾಣಿಯವರಿಗೆ ಜನಸಂಘದ ಮಾರ್ಗದರ್ಶಕರಲ್ಲೊಬ್ಬರಾಗಿದ್ದ, ಸಂತಸದೃಶ ಜೀವನ ನಡೆಸುತ್ತಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರೊಂದಿಗೆ ಆತ್ಮೀಯ ಸಂಬಂಧವಿತ್ತು. ತಮ್ಮ ಆತ್ಮಕಥೆಯಲ್ಲಿ ಆಡ್ವಾಣಿ ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಹೀಗೆ ಬರೆದಿದ್ದಾರೆ:
"ಅವರು ತಮ್ಮ ಬಗ್ಗೆ ಮಾತಾಡುವುದನ್ನು ಮುಜುಗರ ಎಂದು ತಿಳಿದಿದ್ದರು. ಅವರು ಹೇಳಿದ್ದನ್ನು ನಡೆಯಲ್ಲಿ ತೋರಿಸಿದರು. ಅವರ ನಾಯಕತ್ವದ ಬೇರುಗಳಿದ್ದದ್ದೇ ಎಲ್ಲರನ್ನು ಅಪ್ಪಿಕೊಳ್ಳುವ ದಾರ್ಶನಿಕತೆಯಲ್ಲಿ. ಅವರು ಮಾನವೀಯತೆಯ ಸಾಕಾರಮೂರ್ತಿ. ಅಧಿಕಾರದ ಬಗ್ಗೆ ನಿಕೃಷ್ಟತೆ ಇದ್ದ ರಾಜಕಾರಣಿ ಅವರಾಗಿದ್ದರು. ಅವರೇ ಪಂಡಿತ ದೀನದಯಾಳ್‌ಜೀ"
ಉಪಾಧ್ಯಾಯರೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಬಳಸಿಕೊಂಡು ಆಡ್ವಾಣಿಯವರು ಒಮ್ಮೆ ಅವರಲ್ಲಿ ಆರ್ಗನೈಸರ್ ಪತ್ರಿಕೆಗೆ ಒಂದು ಅಂಕಣವನ್ನು ಬರೆಯಲಾರಂಭಿಸುವಂತೆ ಕೇಳಿಕೊಂಡರು.
ಆಡ್ವಾಣಿಯವರ ಒತ್ತಾಯದ ಮೇರೆಗೆ ಉಪಾಧ್ಯಾಯರು ’ರಾಜಕೀಯ ಡೈರಿ’ ಎಂಬ ಅಂಕಣವನ್ನು ಆರ್ಗನೈಸರ್‌ಗೆ ಬರೆಯಲಾರಂಭಿಸಿದರು. ಆಯಾ ವಾರದ ವಿವಿಧ ರಾಜಕೀಯ ವಿದ್ಯಮಾನಗಳನ್ನು ಉಪಾಧ್ಯಾಯರು ತಮ್ಮದೇ ಆದ ದೃಷ್ಟಿಕೋನದಿಂದ ಆ ಅಂಕಣದಲ್ಲಿ ವಿಮರ್ಶಿಸುತ್ತಿದ್ದರು. ಅವರ ಅನನ್ಯ ಒಳನೋಟಗಳ ಕಾರಣ ಆ ಅಂಕಣ ಬಹುಬೇಗ ಜನಪ್ರಿಯವಾಯಿತು. ಮುಂದೆ ಇದೇ ಅಂಕಣ ಬರಹಗಳ ಸಂಕಲನ ’ರಾಜಕೀಯ ಡೈರಿ’ ಎಂಬ ಹೆಸರಿನಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬಂತು.
ಇದೆಲ್ಲವನ್ನು ಗಮನಿಸಿದ ಆಡ್ವಾಣಿ, ಉಪಾಧ್ಯಾಯರಲ್ಲಿ ತಮ್ಮ ಅಪಾರ ಅನುಭವ, ಪ್ರವಾಸ, ಒಳನೋಟಗಳಿಂದ ಕೂಡಿದ ವೈಯುಕ್ತಿಕ ಸ್ಪರ್ಷವಿರುವ ಅಂಕಣವೊಂದನ್ನು ಬರೆಯಿರಿ ಎಂದು ಕೇಳಿಕೊಂಡರು. ಆದರೆ ಉಪಾಧ್ಯಾಯರು ಇದಕ್ಕೆ ಖಡಾಖಂಡಿತವಾಗಿ ಒಲ್ಲೆ ಎಂದರು! ಕಾರಣ ಕೇಳಿದಾಗ: "ಈ ರೀತಿಯ ಅಂಕಣ ಆರಂಭಿಸಿದರೆ ಅನಗತ್ಯವಾಗಿ ’ನಾನು’ ಎಂಬ ಪದವನ್ನು ಅಂಕಣದುದ್ದಕ್ಕೂ ಉಲ್ಲೇಖಿಸಬೇಕಾದ ಪ್ರಮೇಯ ಬರುತ್ತದೆ. ನನಗದು ಇಷ್ಟವಿಲ್ಲದ ಸಂಗತಿ ಎಂದು ಹೇಳಿದರು!"
ಆದರೂ ಆಡ್ವಾಣಿಯವರು ನಿಮ್ಮ ಬರಹ ಓದುಗರಿಗೆ ಇಷ್ಟವಾಗುತ್ತದೆ ಎಂದು ತುಂಬ ಒತ್ತಾಯ ಮಾಡಿದಾಗ ಉಪಾಧ್ಯಾಯರು ಬರೆಯಲು ಒಪ್ಪಿದರು. ಆದರೆ ಎರಡು ಅಂಕಣ ಬರೆದು, ಅದು ಪ್ರಕಟವಾದ ನಂತರ ಆಡ್ವಾಣಿಯವರಲ್ಲಿಗೆ ಬಂದ ಉಪಾಧ್ಯಾಯರು ನಾನು ಇನ್ನು ಈ ಅಂಕಣವನ್ನು ಮುಂದುವರೆಸುವುದಿಲ್ಲ ಎಂದುಬಿಟ್ಟರಂತೆ.
"ನಾನು ಯಾವುದೇ ವಿಷಯದ ಬಗ್ಗೆ ಬೇಕಾದರೂ ಬರೆಯುತ್ತೇನೆ. ಆದರೆ ನನ್ನ ಬಗೆಗಲ್ಲ. ಅದು ನನಗೆ ಆಗಿಬರುವುದಿಲ್ಲ" ಎಂದು ಉಪಾಧ್ಯಾಯರು ಕಾರಣ ನೀಡಿದ್ದರು.
ಉಪಾಧ್ಯಾಯರ ಈ ನಿರಹಂಕಾರದ ಮನಸ್ಥಿತಿಗೊಂದು ಪ್ರಣಾಮಗಳು.
Read More

ಜಾತ್ಯತೀತತೆಯಲ್ಲಿ ಭಾರತೀಯತೆ

ನಾನು ಸಮಾಜಶಾಸ್ತ್ರವನ್ನಾಗಲಿ ಅಥವಾ ರಾಜನೀತಿಯನ್ನಾಗಲಿ ಶಾಸ್ತ್ರೀಯವಾಗಿ ಓದಿಲ್ಲ. ಬಹುಷ: ಅವುಗಳನ್ನು ಶಾಸ್ತ್ರೀಯವಾಗಿ ಓದುವುದು ನನ್ನಿಂದ ಸಾಧ್ಯವೂ ಇಲ್ಲ. ಆದರೆ ದಿನಂಪ್ರತಿ ಒಂದೆರಡು ಪತ್ರಿಕೆಗಳನ್ನು ಓದುವ ಕಾರಣದಿಂದ ಭಾರತೀಯ ಸಮಾಜ ಮತ್ತು ಭಾರತದ ರಾಜಕಾರಣದ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ("ಇದೆ" ಅಂತ ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳುವುದು ಅಹಂಕಾರವಾಗಬಹುದು.) ವಿದ್ವಾಂಸರು ರಾಜನೀತಿಯ ಬಗ್ಗೆಯಾಗಲಿ ಅಥವಾ ಸಮಾಜಶಾಸ್ತ್ರದ ಬಗ್ಗೆಯಾಗಲಿ ಬರೆದ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಆದರೂ ಭಾರತದ ರಾಜಕಾರಣಿಯ ಮತ್ತು ಒಬ್ಬ ಸಾಮಾನ್ಯ ಭಾರತೀಯನ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ.
ಚುನಾವಣೆಗಳು ಎದುರಾದಾಗ ಬಿಜೆಪಿಯ ಪ್ರಧಾನ ಕಛೇರಿಯಿಂದ ಯಾವ ತರಹದ ಹೇಳಿಕೆಗಳು ಹೊರಡಬಹುದು ಮತ್ತು ಅದಕ್ಕೆ ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳು ಹೇಗಿರಬಹುದು ಎನ್ನುವುದನ್ನೂ ತಕ್ಕಮಟ್ಟಿಗೆ ಊಹಿಸುವುದು ಸಾಧ್ಯ.
ಭಾರತದ ಯಾವ ರಾಜಕಾರಣಿಯೇ ಇರಲಿ, ಮತ ಕೇಳುವ ಅವಕಾಶ ಸಿಕ್ಕಾಗಲೆಲ್ಲ 'ಜಾತ್ಯತೀತತೆ' ಎಂಬ ಅದ್ಭುತವಾದ ಪದವೊಂದನ್ನು ತನ್ನ ಚುನಾವಣಾ ಭಾಷಣದಲ್ಲಿ ಖಂಡಿತವಾಗಿಯೂ ಉಪಯೋಗಿಸುತ್ತಾನೆ. ರಾಜಕಾರಣಿಗಳು ಜಾತ್ಯತೀತತೆ ಎಂಬ ಪದವನ್ನು ಉಪಯೋಗಿಸಿಕೊಂಡು ಜನರ ಬಳಿ ಮತ ಕೇಳುವುದನ್ನು ನನ್ನ ಬಾಲ್ಯದಿಂದಲೂ ನೋಡುತ್ತಿದ್ದೇನೆ. ಭಾರತದ ಹೆಚ್ಚಿನ ರಾಜಕಾರಣಿಗಳು ಅವಕಾಶ ಸಿಕ್ಕಾಗಲೆಲ್ಲ ತಾವೊಬ್ಬರೇ ಜಾತ್ಯತೀತತೆಯ ನಿಜವಾದ ರಕ್ಷಕರು ಎಂದು ಫೋಸನ್ನೂ ಕೊಡುತ್ತಾರೆ. ಆದರೆ ಯಾವೊಬ್ಬ ರಾಜಕಾರಣಿಯೂ ಜಾತ್ಯತೀತತೆ ಎಂದರೆ ಏನು ಎಂದು ವ್ಯಾಖ್ಯಾನಿಸಿದ್ದನ್ನು ನಾನು ನೋಡಿಲ್ಲ. ಅಥವಾ ಯಾವೊಬ್ಬ ರಜಕಾರಣಿಯೂ ತನ್ನ ಪ್ರಕಾರ ಜಾತ್ಯತೀತತೆ ಅಂದರೆ ಏನು ಎಂಬುದನ್ನು ವಿವರಿಸುವ ಗೋಜಿಗೆ ಹೋದಂತಿಲ್ಲ.
ಜಾತ್ಯತೀತತೆ ಪದವನ್ನು ನಾವು ಇಂಗ್ಲಿಷಿನ ಸೆಕ್ಯುಲರ್ ಪದಕ್ಕೆ ಸಂವಾದಿಯಾಗಿ ಬಳಸುತ್ತಿದ್ದೇವೆ. ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಸೆಕ್ಯುಲರ್ ಅಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧ ಪಡದೇ ಇರುವಂಥದ್ದು ಎಂದರ್ಥ. ಸರಿ, ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೂಚಿಸಿರುವ ಸೆಕ್ಯುಲರ್ ಎಂಬ ಪದವನ್ನು ಅರ್ಥಮಾಡಿಕೊಳ್ಳುವಲ್ಲಿ ನನಗೆ ಯಾವುದೇ ತೊಂದರೆ ಇಲ್ಲ.
ಯುರೋಪಿನಲ್ಲಿ ಜಾತ್ಯತೀತತೆ ಎಂದರೆ; ದೇಶದ ಪ್ರಭುತ್ವವು ತನ್ನ ನಾಗರಿಕರ ಧಾರ್ಮಿಕ [ಅಥವಾ ಮತೀಯ] ವ್ಯವಹಾರಗಳಿಂದ ದೂರ ಉಳಿಯುತ್ತದೆ. ಧಾರ್ಮಿಕ ಸಂಸ್ಥೆಗಳ ವ್ಯವಹಾರಗಳಲ್ಲಿ ಸರಕಾರವು ತಲೆಹಾಕುವುದಿಲ್ಲ ಮತ್ತು ಸರಕಾರವು ಧಾರ್ಮಿಕ ಸಂಘ, ಸಂಸ್ಥೆಗಳಿಗೆ ಸರಕಾರದ ವ್ಯವಹಾರದಲ್ಲಿ ಮೂಗುತೂರಿಸಲು ಅವಕಾಶ ನೀಡುವುದಿಲ್ಲ. ಹೌದು, ಯುರೋಪು ಎಷ್ಟರ ಮಟ್ಟಿಗೆ ಜಾತ್ಯತೀತಯನ್ನು ಅಳವಡಿಸಿಕೊಂಡಿದೆ ಎಂಬುದು ಚರ್ಚಾಸ್ಪದ ವಿಚಾರವೇ. ಆದರೆ ಈ ಲೇಖನದಲ್ಲಿ ಆ ವಿಚಾರವನ್ನು ಎಳೆಯುವುದು ಬೇಡ.
ಭಾರತದ ಸಂವಿಧಾನ ಕೂಡ ನಮ್ಮ ದೇಶವನ್ನು ಜಾತ್ಯತೀತ ದೇಶ ಅಂತಲೇ ಘೋಷಿಸುತ್ತದೆ. ಅಂದರೆ; ಭಾರತ ಸರಕಾರವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಮತನ್ನು ಅಪ್ಪಿಕೊಳ್ಳುವುದಿಲ್ಲ. ಭಾರತದಲ್ಲಿ ಧರ್ಮ ಮತ್ತು ಸರಕಾರ ಬೇರೆ ಬೇರೆಯಾಗಿರುತ್ತದೆ ಮತ್ತು ಈ ದೇಶಕ್ಕೆ ಯಾವುದೇ ಅಧಿಕೃತ ಧರ್ಮ ಇಲ್ಲ. ಇದೂ ನನಗೆ ಸರಿಯಾಗಿಯೇ ಅರ್ಥವಾಗುತ್ತದೆ. ಆದರೆ ಭಾರತದ ರಾಜಕಾರಣಿಯೊಬ್ಬ ಜಾತ್ಯತೀತತೆ ಎಂಬ ಪದಪ್ರಯೋಗ ಮಾಡಿದಾಗ ನನಗೆ ಆತ ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗುವುದಿಲ್ಲ! ನನ್ನು ಸಮಸ್ಯೆ ಇರುವುದೇ ಇಲ್ಲಿ.
ನಾನು ಕಂಡಹಾಗೆ ಭಾರತದ ರಾಜಕಾರಣದಲ್ಲಿ ಮೂರು ವಿಧದ ಜಾತ್ಯತೀತತೆಗಳಿವೆ.
ಒಂದನೆಯ ವಿಧದ ಜಾತ್ಯತೀತತೆ ಯಾವತ್ತಿಗೂ ಹಿಂದೂ ಸಂವೇದನೆಗಳನ್ನು ಅರ್ಥಮಾಡಿಕೊಳ್ಳಲಾರದು. ಇದು ಹಿಂದೂ ಧರ್ಮದ ಎಲ್ಲ ವಿಚಾರಗಳನ್ನು ಖಂಡಿಸುತ್ತಿರುತ್ತದೆ ಮತ್ತು ಹಿಂದೂ ಮೌಲ್ಯಗಳ ಬಗ್ಗೆ ಯಾವಾಗಲೂ ಕೀಳಾಗಿ ಮಾತಾಡುತ್ತಿರುತ್ತದೆ. ಆದರೆ ಜಾತ್ಯತೀತತೆಯ ಈ ವಿಧ ಯಾವತ್ತಿಗೂ ಹಿಂದೂಯೇತರ ಧರ್ಮವನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಗೋಜಿಗೆ ಹೋಗುವುದಿಲ್ಲ. ಇದು ಯಾವತ್ತಿಗೂ ಒಬ್ಬ ಜಿಹಾದಿಯ ಬಳಿ ಹಿಂಸೆಯನ್ನು ಬಿಡು ಅಂತ ಹೇಳುವುದಿಲ್ಲ. ಆದರೆ ಹಿಂದೂ ಕಾರ್ಯಕರ್ತರೆಲ್ಲರೂ ಫ್ಯಾಸಿಸ್ಟ್‌ಗಳು ಮತ್ತು ಹಿಂದೂ ಫ್ಯಾಸಿಸಮ್‌ನಿಂದ ದೇಶಕ್ಕೇ ಗಂಡಾಂತರ ಅಂತ ಈ ಜಾತ್ಯತೀತತೆ ಯಾವತ್ತಿಗೂ ಮಾತಾಡುತ್ತಿರುತ್ತದೆ. ಆದರೆ ಹಿಂದೂಯೇತರರ ಫ್ಯಾಸಿಸಮ್ ಕೂಡ ದೇಶಕ್ಕೆ ಅಪಯಕಾರಿ ಎನ್ನುವುದನ್ನು ಇವರು ಯಾವತ್ತಿಗೂ ಹೇಳುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ.
ಭಾರತದ ರಾಜಕಾರಣದಲ್ಲಿ ವ್ಯಾಪಕವಾಗಿರುವುದೇ ಈ ಮಾದರಿಯ ಜಾತ್ಯತೀತತೆ. ಈ ಮಾದರಿಯ ಜಾತ್ಯತೀತತೆಯ ಆರಾಧಾಕರು ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಮತ್ತು ಅವುಗಳಲ್ಲಿ ಬರುವ ಪಾತ್ರಗಳ ಬಗ್ಗೆ ಕುಹಕಮಾಡಲು ಸದಾ ಕಾದಿರುತ್ತಾರೆ. ಆ ಕಾವ್ಯಗಳು ಸಾರುವ ಜೀವನ ಮೌಲ್ಯಗಳ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಅದಲ್ಲದೆ, ಜಾತ್ಯತೀತತೆ ಮತ್ತು ವಿಚಾರವಾದದ ಹೆಸರಿನಲ್ಲಿ ಇವರು ಯಾವತ್ತಿಗೂ ಹಿಂದೂ ನಂಬಿಕೆಗಳನ್ನು ಹಳಿಯಲು ಅವಕಾಶ ನೋಡುತ್ತಿರುತ್ತಾರೆ. ಆದರೆ ಹಿಂದೂಯೇತರ ಧರ್ಮಗಳ ಬಗ್ಗೆ, ಅವುಗಳ ನಂಬಿಕೆಯ ಬಗ್ಗೆ ಪ್ರಶ್ನೆ ಮಾಡುವ ಗೋಜಿಗೇ ಇವರು ಹೋಗುವುದಿಲ್ಲ. ಏಕೆ ಅಂತ ಗೊತ್ತಿಲ್ಲ. ಬಹುಷಃ ಜೀವ ಭಯವಿರಬೇಕು! ಹಿಂದೂ ನಂಬಿಕೆಗಳನ್ನು ತೆಗಳುವುದು ಮತ್ತು ಹಾಸ್ಯಮಾಡುವುದೇ ಈ ಮಾದರಿಯ ಜಾತ್ಯತೀತತೆ.
ಎರಡನೆಯ ಮಾದರಿಯ ಜಾತ್ಯತೀತತೆಯ ಸ್ವರೂಪ ಸ್ವಲ್ಪ ಭಿನ್ನವಾಗಿದೆ. ಇದು ನಾಸ್ತಿಕವಾದಕ್ಕೆ ಹತ್ತಿರವಾಗಿದೆ. ಅವರು ಎಲ್ಲಾ ಧರ್ಮಗಳ ದೇವರ ಕಲ್ಪನೆಯನ್ನು [ಅಥವಾ ಅಸ್ತಿತ್ವವವನ್ನು] ಪ್ರಶ್ನಿಸುತ್ತಿರುತ್ತಾರೆ. ಅವರಿಗೆ ಹಿಂದೂ - ಮುಸ್ಲಿಮ್ ಎಂಬ ಬೇಧವಿಲ್ಲ. ದೇವರ ಅಸ್ತಿತ್ವದ ಪ್ರಶ್ನೆಯಲ್ಲಿ ಅವರ ಪಾಲಿಗೆ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲಾ ಒಂದೇ. ಇವರು ಎಲ್ಲ ಧರ್ಮೀಯರ ಆಸ್ತಿಕ ಭಾವನೆಗಳನ್ನೂ ಗೇಲಿಮಾಡುತ್ತಾರೆ. ಇದೇ ಈ ಮಾದರಿಯ ಜಾತ್ಯತೀತತೆಯ ದೋಷ. ಹಾಗೆ ಗೇಲಿ ಮಾಡುವುದರಿಂದ ಆಸ್ತಿಕ ಮನಸ್ಸುಗಳು ಅದೆಷ್ಟು ನೊಂದುಕೊಳ್ಳಬಹುದು ಎಂಬ ಬಗ್ಗೆ ಇವರು ಚಿಂತಿಸುವುದಿಲ್ಲ.
ಸಮಾಜದ ಒಳಿತಿಗೆ ಕೆಲವೊಂದು ಧಾರ್ಮಿಕ ನಂಬಿಕೆಗಳು ಅಗತ್ಯ. ದೇವರನ್ನು ನಂಬುವುದು, ಭಕ್ತಿಯಿಂದ ಅವನನ್ನು ಪೂಜಿಸುವುದು ಮನುಷ್ಯನನ್ನು ಆಧ್ಯಾತ್ಮಿಕ ಔನ್ನತ್ಯಕ್ಕೆ ಕೊಂಡೊಯ್ಯಬಲ್ಲವು. ಉಪವಾಸ, ದೇವರಿಗೆ ಹಣ್ಣುಹಂಪಲುಗಳನ್ನು ಅರ್ಪಿಸುವುದು, ದೇವರ ಹೇಸರಿನಲ್ಲಿ ಬಡವರಿಗೆ ಉಪಯುಕ್ತ ವಸ್ತುಗಳನ್ನು ದಾನ ಮಾಡುವುದು ಮುಂತಾದವುಗಳನ್ನು ಆಸ್ತಿಕತೆಯು ಅನಾದಿಯಿಂದಲೂ ಪೋಷಿಸಿಕೊಂಡು ಬಂದಿದೆ. ಇದರಿಂದ ಸಮಾಜಕ್ಕೆ ಸಾಕಷ್ಟು ಒಳ್ಳೆಯದಾಗಿದೆ. ಆದರೆ ಈ ಜಾತ್ಯತೀತತೆಯ ಮುಖವಾಡವನ್ನು ತೊಟ್ಟುಕೊಂಡಿರುವ ನಾಸ್ತಿಕತೆಯ ದೆಸೆಯಿಂದ ಪ್ರತಿಯೊಂದು ಧಾರ್ಮಿಕ ನಂಬಿಕೆಗಳೂ ಪ್ರಶ್ನಿಸಲ್ಪಡುತ್ತಿವೆ. ಇವರು ಜನಿವಾರ ಹಾಕಿಕೊಳ್ಳುವ ಬ್ರಹ್ಮಣರನ್ನು ಬಯ್ಯುತ್ತಾರೆ, ತಿಲಕ ಇಟ್ಟುಕೊಳ್ಳುವ ಕಾರಣಕ್ಕೆ ಇಡೀ ಹಿಂದೂ ಸಮಾಜವನ್ನು ತೆಗಳುತ್ತಾರೆ, ಗಡ್ಡ ಬಿಡುವ ಕಾರಣಕ್ಕೆ ಮುಸ್ಲಿಮರನ್ನು ಹಾಸ್ಯಮಾಡುತ್ತಾರೆ.
ಈ ಮಾದರಿಯ ಜಾತ್ಯತೀತತೆಯ ಬೆಂಬಲಿಗರು ಕೂಡ ವಿಚಾರವಾದ ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ.
ಇವೆರಡೂ ಮಾದರಿಗಳನ್ನು ಬಿಟ್ಟು - ಭಾರತೀಯ ಮನಸ್ಥಿತಿಗೆ ಅತ್ಯಂತ ಹತ್ತಿರವಾದ - ಮೂರನೆಯ ಮಾದರಿಯ ಜಾತ್ಯತೀತತೆಯೊಂದಿದೆ. ಈ ಮಾದರಿಯ ಜಾತ್ಯತೀತತೆ ಒಬ್ಬ ಹಿಂದೂವನ್ನು ನೈಜ ಹಿಂದೂವಾಗಿಯೇ ಉಳಿಯಲು, ಮುಸ್ಲಿಮನನ್ನು ನೈಜ ಮುಸ್ಲಿಮನಾಗಿಯೇ ಉಳಿಯಲು ಮತ್ತು ಒಬ್ಬ ಕ್ರೈಸ್ತನನ್ನು ನೈಜ ಕ್ರೈಸ್ತನಾಗಿಯೇ ಉಳಿಯುವ ಅವಕಾಶ ಕಲ್ಪಿಸುತ್ತದೆ. ಇದು ಎಲ್ಲ ಧರ್ಮಗಳೂ ನಿಜವಾದ ಧರ್ಮಗಳು ಎಂದೇ ನಂಬುತ್ತದೆ ಅಲ್ಲದೆ ಎಲ್ಲ ಧರ್ಮಗಳೂ ಸಮಾನ ಎಂದೇ ಭಾವಿಸುತ್ತದೆ. "ನಿಜವಾದ ದೇವರು ಯಾರು?" ಅಂತ ಯಾರಾದರೂ ಈ ಮಾದರಿಯ ಜಾತ್ಯತೀತರಲ್ಲಿ ಕೇಳಿದರೆ "ಎಲ್ಲವೂ ದೇವರ ಅಂಶವೇ" ಎಂದು ಉತ್ತರಿಸುತ್ತಾರೆ. ಎಲ್ಲ ಅವತಾರಗಳೂ ಒಂದೇ ಶಕ್ತಿಯ ವಿವಿಧ ರೂಪಗಳು ಎಂಬುದು ಈ ಮಾದರಿಯ ಜಾತ್ಯತೀತತೆಯ ವಿವರಣೆ. ಖ್ಯಾತ ಪತ್ರಕರ್ತ ಎಮ್. ಜೆ. ಅಕ್ಬರ್ "ಹೇಳಿದಂತೆ, ಇದು, ಒಬ್ಬ ಹಿಂದೂವಿಗೆ ಹಿಂದುತ್ವವಾದಿಯಾಗಿರಲು ಅವಕಾಶ ನೀಡುತ್ತದೆ. ಆದರೆ ಮುಸ್ಲಿಮ್ ವಿರೋಧಿಯಾಗುವ ಅಧಿಕಾರ ನೀಡುವುದಿಲ್ಲ. ಹಾಗೆಯೇ ಒಬ್ಬ ಮುಸಲ್ಮಾನನಿಗೆ ಮುಸ್ಲಿಮ್ ಪರ ಇರಲು ಅವಕಾಶ ನೀಡುತ್ತದೆ. ಆದರೆ ಹಿಂದೂ ವಿರೋಧಿಯಾಗಲು ಅಧಿಕಾರ ನೀಡುವುದಿಲ್ಲ."
ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಮಾರ್ಕ್ ಟುಲ್ಲಿ ಒಮ್ಮೆ ಹೀಗೆ ಹೇಳಿದ್ದರು: ಭಾರತದಲ್ಲಿ ವಾಸಿಸುತ್ತಿರುವ ಒಬ್ಬ ಕ್ರೈಸ್ತನಾಗಿ ನಾನು ಇಲ್ಲಿ ದೊರಕಿರುವ ಸ್ವಾತಂತ್ರವನ್ನು ಕಂಡು ಖುಷಿಪಡುತ್ತೇನೆ. "ಎಲ್ಲ ನದಿಗಳು ಸಮುದ್ರದತ್ತ ಸಾಗುತ್ತವೆ. ಆದರೆ ಅವುಗಳ ಮಾರ್ಗ ಮಾತ್ರ ಬೇರೆ ಬೇರೆ. ಕೆಲವು ನೇರವಾಗಿ ಸಾಗಿದರೆ ಇನ್ನು ಕೆಲವು ಸುತ್ತು ಹಾಕಿ ಸಾಗುತ್ತವೆ. ಆದರೆ ಅವೆಲ್ಲಾ ಸಾಗುವುದು ಸಮುದ್ರದ ಕಡೆಗೆ. ಹಾಗೆಯೇ, ದೇವರ ಅನುಗ್ರಹದಿಂದ, ದೇವರೆಡೆಗೆ ಸಾಗಲು ಹಲವು ಪಥಗಳಿವೆ" ಎಂದು ನನಗೆ ಹೇಳಿಕೊಟ್ಟವರು ಒಬ್ಬ ಹಿಂದೂ ಸನ್ಯಾಸಿಯಾಗಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು. ನಾನು ಮೊದಲು ಭಾರತಕ್ಕೆ ಬಂದಾಗ ಇದನ್ನು ನಂಬಲಿಲ್ಲ. ದೇವರೆಡೆಗೆ ಸಾಗಲು ಕ್ರೈಸ್ತಮತವೊಂದೇ ದಾರಿ ಎಂದು ನಾನು ನಂಬಿದ್ದೆ. ಆದರೆ ಭಾರತದ ಸಹಿಷ್ಣುತೆ ಮತ್ತು ಅದರ ಜಾತ್ಯತೀತತೆ ನನ್ನ ನಂಬಿಕೆಯನ್ನು ಬದಲಾಯಿಸಿದೆ.
ಜಾತ್ಯಾತೀತತೆಯ ಮೂರನೆಯ ವಿಧವನ್ನು ನಾನು ಭಾರತೀಯ ಜಾತ್ಯತೀತತೆ ಅಂತ ಕರೆಯುತ್ತೇನೆ. ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಭಾರತ ಅನುಸರಿಸಬೇಕಾಗಿದ್ದು ಇದೇ ಮಾದರಿಯ ಜಾತ್ಯತೀತತೆಯನ್ನು.
ಅದಿರಲಿ. ನಮ್ಮ ರಾಜಕೀಯ ನಾಯಕ ಶಿಖಾಮಣಿಗಳು ಯಾವ ಮಾದರಿಯ ಜಾತ್ಯಾತೀತತೆಯನ್ನು ಅನುಸರಿಸುತ್ತಿದ್ದಾರೆ ಅಂತ ಯಾರಾದರೂ ಹೇಳಬಹುದಾ?
ಭಾರತದ ಕೆಲವು ರಾಜಕೀಯ ಪಕ್ಷಗಳಿಗೆ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವುದರಲ್ಲಿಯೇ ಸಮಯ ಹೋಗುತ್ತಿದೆ. ಇನ್ನು ಕೆಲವರು ಬಹುಸಂಖ್ಯಾತ ವಿರೋಧಿ ಭಾವನೆಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಿಷ್ಟು ಮಂದಿ ಅಲ್ಪಸಂಖ್ಯಾತರ ಮತವೇ ತಮಗೆ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಇವರಿಬ್ಬರೂ ಜಾತ್ಯತೀತತೆಯ ನೆಜವಾದ ಸಂರಕ್ಷಕರು ತಾವೇ ಎಂದು ವೇದಿಕೆಯ ಮೇಲೆ ಹೇಳಿಕೊಳ್ಳುತ್ತಾರೆ.
ಆದರೆ ಭಾರತದ ಯಾವೊಂದು ರಾಜಕೀಯ ಪಕ್ಷವೂ ನೈಜ ಅರ್ಥದಲ್ಲಿ ಜಾತ್ಯತೀತ ಅಂತ ನನಗನಿಸುವುದಿಲ್ಲ. ಮೂರನೆಯ ಮಾದರಿಯ ಜಾತ್ಯತೀತತೆಯನ್ನು ಯಾವ ಪಕ್ಷವೂ ಅನುಸರಿಸುತ್ತಿರುವಂತೆ ಕಾಣಿಸುತ್ತಿಲ್ಲ. ತಾನು ಹಿಂದೂ ಮತ್ತು ಮುಸ್ಲಿಮರ ನಡುವೆ ತಾರತಮ್ಯ ಮಾಡಲಾರೆ ಅಂತ ಬಿಜೆಪಿ ಹೇಳಿದರೆ, ತನ್ನಿಂದ ಮಾತ್ರ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಉಳಿಯುತ್ತದೆ ಅಂತ ಕಾಂಗ್ರೆಸ್ ಘೋಷಿಸಿಕೊಳ್ಳುತ್ತದೆ. ಆದರೆ ಇವೆರಡೂ ಪಕ್ಷಗಳು ಏನನ್ನು ಮಾಡಬಾರದೋ ಅದನ್ನೇ ಮಾಡುತ್ತವೆ.
ಬಿಜೆಪಿ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ದೇಶವನ್ನು ಆಳುತ್ತಿದ್ದಾಗ ಹಜ್ ಸಬ್ಸಿಡಿಯನ್ನು ಹೆಚ್ಚಿಸಿತು. ಆದರೆ ಮತ್ತೊಂದೆಡೆ ಸಮಾನ ನಾಗರಿಕ ಸಂಹಿತೆಯ ಮಂತ್ರವನ್ನು ಜಪಿಸುತ್ತ ಕುಳಿತಿತ್ತು. ಇತ್ತ ಸ್ವಯಂಘೋಷಿತ ಸೆಕ್ಯುಲರ್ ಪಕ್ಷವಾದ ಕಾಂಗ್ರೆಸ್ ತನ್ನಿಂದ ಮಾತ್ರ ಈ ದೇಶದ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ, ತಾನು ಮಾತ್ರ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬಲ್ಲೆ ಎಂದು ಹೇಳುತ್ತಿದೆ. ಆದರೆ ೧೯೮೪ರ ಸಿಖ್ ವಿರೋಧಿ ಹತ್ಯಾಕಾಂಡದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್‌ಗೆ ಗಂಟಲು ಕಟ್ಟಿದಂತಾಗುತ್ತದೆ. ಆದ ಅಲ್ಪಸಂಖ್ಯಾತರು, ಜಾತ್ಯತೀತತೆ ಕಾಂಗ್ರೆಸ್ಸಿಗೆ ಮಾಯಾಜಿಂಕೆಯಂತೆ ಕಾಣಬಹುದು.
ಇರಲಿ, ಯಾವುದೇ ಬರಹಗಳಿಂದ, ಯಾವ ಪತ್ರಕರ್ತನ ವರದಿಗಳಿಂದ ಭಾರತದ ರಾಜಕೀಯ ಪಕ್ಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಪಕ್ಷಗಳ ಇಬ್ಬಂದಿತನವನ್ನು ಇಲ್ಲವಾಗಿಸುವುದು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಜನಪರವಾಗಿರಿ ಅಂತ ಹೇಳುವುದು ಬಾಯಿ ಹಾಳಿನ ಕೆಲಸ ಮತ್ತು ಬರೆಯುವುದು ಜಾಗ ಹಾಳು ಮಾಡುವ ಕೆಲಸ.
ಆದರೆ ಈ ದೇಶದ ಪ್ರಜಾಸತ್ತೆ ಖಂಡಿತ ಕೆಲವು ಬದಲಾವಣೆಗಳನ್ನು ತರಬಹುದು. ಅದಕ್ಕೆ ಬಲವಾದ ಇಚ್ಛಾಶಕ್ತಿ ಬೇಕು. ಮೇಲೆ ವಿವರಿಸಲಾದ ಮೂರು ಮಾದರಿಯ ಜಾತ್ಯತೀತತೆಯನ್ನು ಒಮ್ಮೆ ನೋಡಿ. ನಾವು ಯಾವ ಮಾದರಿಯ ಜಾತ್ಯತೀತತೆಯನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಿ. ನೀವು ಮೂರನೆಯ ಮಾದರಿಯ ಜಾತ್ಯತೀತತೆಯನ್ನು ಇಷ್ಟಪಡುತ್ತೀರಿ ಎಂಬ ನಂಬಿಕೆಯಿದೆ. ಏಕೆಂದರೆ ಇದು ಎಲ್ಲರ ಭಾವನೆಗಳನ್ನೂ ಗೌರವಿಸುತ್ತದೆ, ಎಲ್ಲ ಧರ್ಮದ ನಂಬಿಕೆಗಳ ಬಗ್ಗೆಯ ಗೌರವ ಹೊಂದಿದೆ. ಅದನ್ನು ಅನುಸರಿಸೋಣ - ಅಕ್ಷರರೂಪದಲ್ಲಿಯೂ ಮತ್ತು ಕಾರ್ಯರೂಪದಲ್ಲಿಯೂ.
ಸೈದ್ಧಾಂತಿಕವಾಗಿ ಈಗಾಗಲೇ ದಿವಾಳಿಯಾಗಿರುವ ರಾಜಕಾರಣಿಗಳು ನಮ್ಮನ್ನೇ ಹಿಂಬಾಲಿಸುತ್ತಾರೆ. ನೆನಪಿರಲಿ!
Read More

ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೇನೆ!

ದೇವರಾಣೆಗೂ ಹೌದು ನಾನು ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದು ಭಾರತೀಯ ಕಾನೂನಿನ ಪ್ರಕಾರ ತಪ್ಪು ಅಂತ ಚೆನ್ನಾಗಿ ಗೊತ್ತು. ಆತ್ಮಹತ್ಯೆಗೆ ಯತ್ನಿಸಿ ಒಂದು ವೇಳೆ ಅದರಲ್ಲಿ ಸಫಲನಾಗದಿದ್ದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕೇಸು ಹಾಕಬಹುದು, ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ ಶಿಕ್ಷೆಯನ್ನೂ ವಿಧಿಸಬಹುದು ಅಂತಲೂ ಗೊತ್ತಿದೆ. ಅದಲ್ಲದೆ, ಇನ್ನೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವುದು ಕೂಡ ಕಾನೂನಿನ ಪ್ರಕಾರ ಮತ್ತು ನೈತಿಕ ದೃಷ್ಟಿಯಿಂದಲೂ ಅಪರಾಧ ಎಂಬ ಅರಿವೂ ಇದೆ.

ಆದರೂ 'ಆತ್ಮಹತ್ಯೆ'ಯ ಬಗ್ಗೆಯೇ ಯೋಚಿಸುತ್ತಿದ್ದೇನೆ! ಅನುಮಾನ ಬೇಡ.

ದಿನಂಪ್ರತಿ ಪತ್ರಿಗಳಲ್ಲಿ ಮತ್ತು ವಾರ್ತಾ ವಾಹಿನಿಗಳಲ್ಲಿ ಆತ್ಮಹತ್ಯೆಯ ವರದಿಗಳನ್ನು ನೋಡಿ, ಕೇಳಿ, ಓದಿ ಬೇಸರ ಮೂಡಿದೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೀಟನಾಶಕ ಸೇವಿಸಿಯೋ ಅಥವಾ ನೇಣು ಬಿಗಿದುಕೊಂಡೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಅಂತಲೋ ಅಥವಾ ರ್ಯಾಂಕ್ ತಪ್ಪಿಹೋಯಿತು ಅಂತಲೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರೇಮಿಗಳ ಆತ್ಮಹತ್ಯೆಯ ಬಗ್ಗೆ ಬರೆದರೆ ಜಾಗ ಹಾಳು, ಹೇಳಿದರೆ ಬಾಯಿ ಹಾಳು. ಅವಳು ಬೈದಳು, ಅವನು ಕೈಕೊಟ್ಟ ಹೀಗೆ ನಾನಾ ಕಾರಣ ಒಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆ ಪ್ರಕರಣ ನಡೆದಾಗಲೆಲ್ಲ ಅವರ ಪ್ರೀತಿಪಾತ್ರರ ನೋವನ್ನೂ ತಕ್ಕ ಮಟ್ಟಿಗೆ ನೋಡಿದ್ದೇನೆ.

ಆದರೂ ಅದೇ 'ಆತ್ಮಹತ್ಯೆ'ಯ ಬಗ್ಗೆ ಆಲೋಚಿಸುತ್ತಿದ್ದೇನೆ. ತೀವ್ರವಾಗಿ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು... ಊಹೂಂ, ಇದ್ಯಾವುದೂ ನನಗೆ ಮುಖ್ಯವಲ್ಲ.

ಇಂಗ್ಲೀಷಿನ suicide ಎಂಬ ಪದಕ್ಕೆ ಸಂವಾದಿಯಾಗಿ ನಾವು ಕನ್ನಡದಲ್ಲಿ ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತೇವೆ. ನಿರ್ದಿಷ್ಟವಾಗಿ ಯಾವಾಗ ನಾವು ಆತ್ಮಹತ್ಯೆ ಎಂಬ ಪದವನ್ನು ಬಳಸಲು ಪ್ರಾರಂಭಿಸಿದೆವು ಎಂಬುದು ನನಗೆ ತಿಳಿಯದ ವಿಚಾರ. ಇಂಗ್ಲಿಷಿನಲ್ಲಿ suicide ಎಂಬ ಪದಕ್ಕೆ ಸ್ವ ಇಚ್ಛೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುವುದು ಎಂಬ ಅರ್ಥವಿದೆ. ಅದಲ್ಲದೆ ಆತ್ಮಘಾತಕ ಕ್ರಿಯೆ ಎಂಬ ಇನ್ನೊಂದು ಅರ್ಥವೂ ಇದೆ ಈ ಪದಕ್ಕೆ. ಕನ್ನಡದಲ್ಲಿಯೂ ನಾವು ಸುಮಾರು ಇದೇ ಅರ್ಥವನ್ನು ಬಿಂಬಿಸಲು ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತಿದ್ದೇವೆ.

'ಆತ್ಮ' ಎನ್ನುವುದು ಇದೇಯಾ? ಇಲ್ಲವಾ? ಇದ್ದರೆ ಅದು ಹೇಗಿದೆ? ಅದರ ಆಕಾರ ಯಾವುದು? ಅದು ಎಲ್ಲಿದೆ? ಅದು ಗಂಡೋ, ಹೆಣ್ಣೋ? ಅದು ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ? ಆತ್ಮ ಅಂದರೆ ಏನು? ಪರಮಾತ್ಮ ಅಂದರೆ ಯಾರು? ಅವೆರಡಕ್ಕಿರುವ ವ್ಯತ್ಯಾಸ ಏನು? ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಲ್ಲಿರುವ ಆತ್ಮನ ಸ್ವರೂಪ ಒಂದೇ ರೀತಿಯದಾ? ಅಥವಾ ಅವೆಲ್ಲಾ ಬೇರೆ ಬೇರೆ ಸ್ವರೂಪ ಹೊಂದಿರುವಂಥದ್ದಾ? ಆತ್ಮಕ್ಕೆ ಭೌತಿಕ ಅಸ್ತಿತ್ವ ಇದೆಯಾ?...

ಇಂಥದೆಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು ಹಿಂದೂ ಪರಂಪರೆಯ ಋಷಿ, ಮುನಿಗಳು. ದೂರದ ಹಿಮಾಲಯದ ಕೊರೆಯುವ ಚಳಿಯಲ್ಲಿ, ಹಿಮಾಚ್ಛಾದಿತ ಶಿಖರಗಳಲ್ಲಿ, ಜಗತ್ತಿನ ಗಲಿಬಿಲಿಗಳಾವುದೂ ತಟ್ಟದ, ಕಾಮ-ಕಾಂಚಾಣದಂತಹ ಯಾವ ವಾಂಛೆಗಳೂ ತಟ್ಟದ ಹಿಮಕಣಿವೆಗಳಲ್ಲಿ ಕುಳಿತು ಅವರು ಆತ್ಮ, ಪರಮಾತ್ಮನ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಆ ಬಗ್ಗೆ ವಿಪುಲ ಸಾಹಿತ್ಯವೂ ಲಭ್ಯವಿದೆ.

ಆತ್ಮ ಎನ್ನುವುದು ಇದೆ. ಅದು ನಿರಾಕಾರ. ಅದು ಗಂಡೂ ಅಲ್ಲ, ಹೆಣ್ಣೂ ಅಲ್ಲ. (ನಪುಂಸಕವೂ ಅಲ್ಲ!) ಅದು ಎಲ್ಲಿಂದಲೂ ಬರುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಒಂದು ದೇಹದಿಂದ ಬಿಡುಗಡೆಯನ್ನು ಪಡೆದು ಇನ್ನೊಂದು ದೇಹಕ್ಕೆ ಪ್ರವೇಶ ಮಾಡುತ್ತದೆ. ಅದು ಸಕಲ ಜೀವಕೋಟಿಗಳಿಗೂ ಚೈತನ್ಯ ಸ್ವರೂಪಿಯಾದದ್ದು. ಮನುಷ್ಯನಿರಲಿ, ಪ್ರಾಣಿಗಳದಿರಲಿ ಅಥವಾ ಪಕ್ಷಿಗಳದೇ ಇರಲಿ ಆತ್ಮನ ಸ್ವರೂಪ ಒಂದೇ. ನಿರಾಕಾರ, ನಿರ್ಗುಣ...

ಹೀಗೆ ಸಾಕಷ್ಟು ವಿವರಗಳು ಹಿಂದೂ ಧರ್ಮಶಾಸ್ತ್ರಗಳಲ್ಲಿ ಆತ್ಮನ ಬಗ್ಗೆ ಬರುತ್ತವೆ. ಅಷ್ಟಕ್ಕೂ, ಹಿಂದೂ ತತ್ವ ಶಾಸ್ತ್ರದ ಪ್ರಮುಖ ಹುಡುಕಾಟವೇ ಆತ್ಮನ ಅಸ್ತಿತ್ವದ ಕುರಿತು. ಆತ್ಮವನ್ನು ಆಧಾರವಾಗಿಟ್ಟುಕೊಂಡೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು ನಮ್ಮಲ್ಲಿ ಬಂದಿವೆ.

ಒಂದು ಕಥೆಯನ್ನು ಬಹುಷಃ ನಾವೆಲ್ಲರೂ ಕೇಳಿದ್ದೇವೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ಹಿಂದೆ ಔರಂಗಜೇಬನ ಸೈನಿಕರು ಕಾಶಿಯ ವಿಶ್ವನಾಥ ಮಂದಿರವನ್ನು ಒಡೆದ ನಂತರ ಕಾಶಿಯಲ್ಲಿ ಹರಿಯುವ ಗಂಗೆಯ ತಟದಲ್ಲಿ ಅಡ್ಡಾಡುತ್ತಿದ್ದರಂತೆ. ಆಗ ಅವರಿಗೆ ಧ್ಯಾನಮಗ್ನನಾಗಿದ್ದ ಒಬ್ಬ ಸಾಧು ಕಣ್ಣಿಗೆ ಬಿದ್ದನಂತೆ. ಆ ಸಾಧು ಧ್ಯಾನಮಗ್ನನಾಗಿದ್ದ ಕಾರಣ ಅವನಿಗೆ ಔರಂಗಜೇಬನ ಸೈನಿಕರು ಅಲ್ಲಿಗೆ ಬಂದಿದ್ದು ತಿಳಿಯಲಿಲ್ಲವಂತೆ. ಆತ ಧ್ಯಾನಮಗ್ನನಾಗಿಯೇ ಇದ್ದನಂತೆ. ಇದನ್ನು ಸಾಧುವಿನ ಅಹಂಕಾರ ಎಂದು ತಿಳಿದ ಸೈನಿಕರು ಆ ಸಾಧುವಿನ ಧ್ಯಾನವನ್ನು ಭಂಗಗೊಳಿಸಿ, ಅವನನ್ನು ಎಚ್ಚರಗೊಳಿಸಿ, ತಮ್ಮ ಖಡ್ಗದಿಂದ ಸಾಧುವನ್ನು ಕಡಿಯಲು ಮುಂದಾದರಂತೆ. ಅಂಥ ಸಂದರ್ಭದಲ್ಲೂ ಎದೆಗುಂದದ ಆ ಸಾಧು; "ನೀವು ನಿಮ್ಮ ಖಡ್ಗದಿಂದ ನನ್ನ ದೇಹವನ್ನು ಸಾಯಿಸಬಲ್ಲಿರಿ. ಆದರೆ ನನ್ನ ಆತ್ಮವನ್ನು ಕೊಲ್ಲುವ ಶಕ್ತಿ ನಿಮಗಿದೆಯಾ?" ಎಂದು ಕೇಳಿದನಂತೆ. ಆಗ ಸೈನಿಕರಿಗೆ ತಮ್ಮ ತಪ್ಪು ಹಾಗೂ ಅಜ್ಞಾನದ ಅರಿವಾಗಿ ಖಡ್ಗವನ್ನು ಪುನಃ ತಮ್ಮ ಓರೆಗೆ ಸಿಕ್ಕಿಸಿ ಅಲ್ಲಿಂದ ಕಾಲ್ಕಿತ್ತರಂತೆ.

ಅಂದರೆ ಎಲ್ಲ ಭಾರತೀಯ (ಅಥವಾ ಹಿಂದೂ) ತತ್ವಶಾಸ್ತ್ರಜ್ಞರ ಅಭಿಪ್ರಾಯವೂ ಒಂದೇ; ಆತ್ಮಕ್ಕೆ ಸಾವಿಲ್ಲ! ದೇಹ ಸಾಯುತ್ತದೆ. ಮತ್ತು ದೇಹಕ್ಕೆ ಸಾವು ಖಂಡಿತ. ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಇದು ಹಿಂದೂ ತತ್ವಶಾಸ್ತ್ರದ ಖಡಾಖಂಡಿತ ತೀರ್ಮಾನ. ಈ ಬಗ್ಗೆ ಚರ್ಚೆಗೆ ಆಸ್ಪದ ಇಲ್ಲದಂತೆ ವಿವರಣೆಗಳನ್ನೂ ಹಿಂದೊ ತತ್ವಶಾಸ್ತ್ರ ಆತ್ಮದ ಬಗ್ಗೆ ನೀಡಿದೆ.

ಈಗ ಮತ್ತೊಮ್ಮೆ 'ಆತ್ಮಹತ್ಯೆ'ಯ ಬಗ್ಗೆ ಮಾತನಾಡೋಣ.

ಯಾರಾದರೂ, ಯಾವುದಾದರೂ ಕಾರಣಕ್ಕೆ ತನ್ನ ಜೀವವನ್ನು ತಾನೇ ಕೊಂದುಕೊಂಡರೆ ನಮ್ಮ ಪತ್ರಕರ್ತರು, ನಮ್ಮ ಲೇಖಕರು 'ಆತ್ಮಹತ್ಯೆ' ಎಂಬ ಪದದಿಂದಲೇ ಬರೆಯುತ್ತಾರೆ. ಆದರೆ ಆತ್ಮ ಎಂಬ ನಿರ್ಗುಣ, ನಿರಾಕಾರ ಅಸ್ತಿತ್ವದ ಬಗ್ಗೆ ನಮಗೆ ತಿಳಿವಳಿಕೆ ಕೊಟ್ಟ ನಮ್ಮ ತತ್ವಶಾಸ್ತ್ರಗಳೇ ಆತ್ಮಕ್ಕೆ ಸಾವಿಲ್ಲ. ಅದು ಅನಾದಿ, ಅನಂತ ಅಂತ ಹೇಳಿರುವಾಗ ಆತ್ಮಹತ್ಯೆ ಎಂಬ ಪದಬಳಕೆ ಎಷ್ಟರ ಮಟ್ಟಿಗೆ ಸರಿ? ಅದು ಆತ್ಮಹತ್ಯೆ ಎಂಬುದರ ಬದಲಾಗಿ 'ಜೀವಹತ್ಯೆ' ಅಥವಾ 'ದೇಹಹತ್ಯೆ' ಎಂದಾಗಬೇಕಲ್ಲವೇ? ಹಾಗಂತ ಆತ್ಮಹತ್ಯೆ ಎಂಬ ಪದಬಳಕೆ ಮಾಡುವವರಿಗೆ ಈ ಸಂಗತಿ ತಿಳಿದಿಲ್ಲ ಅಂತಲ್ಲ. ಆದರೂ ಅದೇನೋ ಕಾರಣದಿಂದ ಆತ್ಮಹತ್ಯೆ ಎಂಬ ಪದಬಳಕೆ ನಮ್ಮಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.

ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಲು ಇದೇ ಕಾರಣ! ಆತ್ಮಹತ್ಯೆ ಎಂಬ ಪದಬಳಕೆಯ ಬದಲು ದೇಹಹತ್ಯೆ ಅಥವಾ 'ಜೀವಹತ್ಯೆ' ಎಂಬ ಪದವನ್ನು ಬಳಸೋಣ. "ಅಲ್ಲಲ್ಲ, ಅದು ಆತ್ಮಹತ್ಯೆ ಅಂತಲೇ ಬಳಸಬೇಕು. ಆತ್ಮಕ್ಕೆ ಸಾವಿದೆ. ಆತ್ಮವನ್ನು ಹತ್ಯೆಮಾಡಬಹುದು. ದೇಹಹತ್ಯೆ ಅಥವಾ ಜೀವ ಹತ್ಯೆ ಎಂಬ ಪದಬಳಕೆ ತಪ್ಪು" ಎಂದು ವಾದಿಸುವವರು ಖಂಡಿತಾ ಇರಬಹುದು. ಅಂಥವರು ತಮ್ಮ ವಾದವನ್ನು ಸಮರ್ಥವಾಗಿ, ಒಪ್ಪುವಂತೆ ಮುಂದಿಟ್ಟರೆ ಆತ್ಮಹತ್ಯೆಯ ಬಗ್ಗೆ ಒಂದು ಒಳ್ಳೆಯ ಚರ್ಚೆ ನಡೆಯಬಹುದು. ಏನಂತೀರಿ?

Read More